About Temple

ಸ್ಥಳ ಪುರಾಣ

Durgaparameshwara-Kodi-Bengre
ಭವ್ಯ ಭಾರತದ ಹೃದಯದಲ್ಲಿ ಅಡಗಿರುವ ಪುಣ್ಯ ಕ್ಷೇತ್ರಗಳು ಅನೇಕ. ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಸಿಗದ ಸುಖ ಶಾಂತಿ ನೆಮ್ಮದಿ ಸಿಗುವುದಾದರೆ ಅದು ಋುಷಿ-ಮುನಿ, ಸಾಧು-ಸಂತರ ಬೀಡಾದ ಈ ಪುಣ್ಯ ಭರತ ಭೂಮಿಯಲ್ಲಿ ಮಾತ್ರ. ಪವಾಡವೆನ್ನಬಹುದಾದ ಕರಾವಳಿ ಭಾಗದಲ್ಲಿ ಪರಶುರಾಮ ಸೃಷ್ಟಿಯಿಂದ ನಿರ್ಮಾಣವಾದ ಭೂ ಭಾಗದಲ್ಲಿ ಕರ್ನಾಟಕದ ಉಡುಪಿ ಜಿಲ್ಲೆಯ, ಕೋಡಿ ಗ್ರಾಮದ “ಕೋಡಿ ಬೆಂಗ್ರೆ”ಯೂ ಒಂದು. ಪೊಡವಿಗೊಡೆಯ ಶ್ರೀ ಕೃಷ್ಣನ ನಾಡಾದ ಉಡುಪಿಯಿಂದ 18 ಕಿ.ಮೀ ಬಂದರೆ ಹಕ್ಕಿಗಳ ಚಿಲಿಪಿಲಿ ಕಲರವದೊಂದಿಗೆ ಉದಯಿಸುವ ಸೂರ್ಯ, ಶಾಂತವಾಗಿ ಹರಿಯುತ್ತಿರುವ ಸ್ವರ್ಣ, ಸೀತಾ ಹಾಗೂ ಮಣ್ಣ ಹೊಳೆ ಇವುಗಳು ಒಂದಕ್ಕೊಂದು ರಮಣೀಯವಾಗಿ ಸಂಧಿಸಿ, ಪಶ್ಚಿಮದಲ್ಲಿ ಭೋರ್ಗರೆಯುವ ಅರಬ್ಬೀ ಸಮುದ್ರದ ಅಬ್ಬರದ ಅಲೆಗಳ ನಡುವೆ ಪವಾಡವೋ ಸದೃಶ್ಯವಾಗಿ ದಕ್ಷಿಣದಲ್ಲಿ ಏಕಮಾತ್ರ ಭೂ ಸಂಪರ್ಕವನ್ನು ಹೊಂದಿ ಸ್ವಚ್ಛ, ಪ್ರಕೃತಿ ರಮಣೀಯಂತೆಯಿಂದ ಕೂಡಿದ ದೈವ ದೇವರುಗಳ ನೆಲೆ ಬೀಡೇ ಈ ಪುಣ್ಯಕ್ಷೇತ್ರ “ಕೋಡಿ ಬೆಂಗ್ರೆ.”

ಸುಮಾರು ಎರಡೂ ಕಾಲು ಶತಮಾನಗಳ ಇತಿಹಾಸ ಇರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಗ್ರಾಮ ದೇವತೆಯಾಗಿ, ಪಂಜುರ್ಲಿ ದೈವವು ಮಹಾಶಕ್ತಿಯಾಗಿ ತನ್ನ ಕಾರಣೀಕ ಶಕ್ತಿಯಿಂದ ಭಕ್ತರನ್ನು ಸೆಳೆಯುವ ಮಹಾಮಹಿನ್ವಿತರಾಗಿದ್ದಾರೆ. ಹಿಂದಿನಿಂದಲೂ ‘ಗದ್ದುಗೆ ಅಮ್ಮ’ ಎಂದೇ ಕರೆಯಲ್ಪಡುತ್ತಿದ್ದ ಶ್ರೀ ದೇವಿಯು ತನ್ನ ಮೂಲ ಬಿಂಬದಲ್ಲಿ ಒಂದು ಮಗುವನ್ನು ಕಂಕುಳದಲ್ಲೂ, ಇನ್ನೊಂದು ಮಗುವನ್ನು ಕೈ ಹಿಡಿದು ನಡೆಸುವ ಮಾತೃ ಸ್ವರೂಪಿಣಿಯಂತಿದ್ದ ಚಂದನದ ಮೂರ್ತಿಯನ್ನು ದೇಗುಲದ ಜೀರ್ಣೋದ್ಧಾರದ ಸಮಯ ಜ್ಯೋತಿಷ್ಯರತ್ನ ಕಬಿಯಾಡಿ ದಿ| ಶ್ರೀನಿವಾಸ ಆಚಾರ್ಯರ ನೇತೃತ್ವದಲ್ಲಿ ‘ಶ್ರೀ ದುರ್ಗಾಪರಮೇಶ್ವರಿ ಅಮ’್ಮ ಎಂಬ ನಾಮಾಂಕಿತದೊಂದಿಗೆ ಶಿಲಾಮೂರ್ತಿಯಾಗಿ ಪ್ರತಿಷ್ಠಾಪನೆ ಮಾಡಲಾಯಿತು. ಹಾಗೂ ಅನಂತ ಶಕ್ತಿಯಾದ ‘ಪಂಜುರ್ಲಿ’ಯೊಂದಿಗೆ ಶ್ರೀ ದೇವಿಯು ಎಲ್ಲಾ ಸಮಾಜದ ಕುಲದೇವತೆಯಾಗಿ, ಗ್ರಾಮದ ಗ್ರಾಮ ದೇವತೆಯಾಗಿ, ಮಾತೃ ವಾತ್ಸಲ್ಯದಿಂದ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಾ, ಅಕ್ಷರಾಭ್ಯಾಸಕ್ಕೆ ಮುನ್ನುಡಿ ಇಡುವ ಮಕ್ಕಳಿಗೆ ಮಹಾಸರಸ್ವತಿ ಮಾತೆಯಾಗಿ, ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುವ ಸಂತಾನ ಲಕ್ಷ್ಮೀಯಾಗಿ ಸಮಂಗಲಿಯರಿಗೆ ಸೌಭಾಗ್ಯದಾತೆಯಾಗಿ ‘ಅಮಾ’್ಮ ಎಂದು ಸೆರಗೊಡ್ಡಿ ಬಂದವರಿಗೆ ನಿರಾಶೆಗೊಳಿಸದೆ ಶ್ರೀ ದುರ್ಗಾಪರಮೇಶ್ವರಿ ಅಮ್ಮ ಎಂದೇ ಬಾವುಕರ ಮಾತೆಯಾಗಿ ಕಂಗೊಳಿಸುತ್ತಿದ್ದಾಳೆ.

ಊರ ಹಾಗೂ ಪರವೂರ ಭಕ್ತಾದಿಗಳು ತಮ್ಮ ಸಂಕಷ್ಟ ಪರಿಹಾರಕ್ಕಾಗಿ ಶ್ರೀದೇವಿಗೆ ಹರಕೆಯನ್ನು ಹೊತ್ತುಕೊಂಡ ಭಕ್ತರ ಕಷ್ಟ ಕಾರ್ಪಣ್ಯಗಳು ದೂರವಾದ ಹಾಗೂ ಮೀನುಗಾರರಿಗೆ ಮತ್ಸ್ಯಕ್ಷಾಮದ ಸಂದರ್ಭದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿದಾಗ ಮತ್ಸ್ಯಾವತಾರಿಯಾಗಿ ಮತ್ಸ್ಯ ಸಂಪತ್ತು ದೊರಕಿಸಿದಂತಹ ನಿದರ್ಶನಗಳಿವೆ.

ಶ್ರೀ ಕ್ಷೇತ್ರದ ಸಂಪ್ರದಾಯದಂತೆ ಸನ್ನಿಧಿಯಲ್ಲಿ ಜನವರಿ 27ರಿಂದ 29ರವರೆಗೆ ವಾರ್ಷಿಕ ಕೆಂಡಜಾತ್ರೆ, ಮಹಾಅನ್ನಸಂತರ್ಪಣೆ ಪಂಜುರ್ಲಿ ಕೋಲ (ಸಿರಿಸಿಂಗಾರದ ಸೇವೆ), ಓಕುಳಿ ಸ್ನಾನ ತುಲಾಭಾರ ಸೇವೆ, ಗೋಂದೋಳು ಸೇವೆ, ಅಲ್ಲದೇ ಮಾರಿಪೂಜೆ, ಶರನ್ನವರಾತ್ರಿ ಉತ್ಸವ, ಶ್ರಾವಣ ಮಾಸ ಪೂಜೆ, ದೀಪೋತ್ಸವದಂತಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೈಶಿಷ್ಟ ಪೂರ್ಣವಾಗಿ ಭಕ್ತ ಜನರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ.
ಶ್ರೀ ಕ್ಷೇತ್ರದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಬಡರೋಗಿಗಳಿಗೆ ಆರ್ಥಿಕ ನೆರವು, ಸಾಂಸ್ಕøತಿಕ, ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ಹಾಗೂ ಸನ್ನಿಧಿಯಲ್ಲಿ ಕಾಲಕಾಲಕ್ಕೆ ಧಾರ್ಮಿಕ ಪ್ರವಚನಗಳನ್ನು ನಡೆಸಿ ಭಕ್ತರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಶ್ರೀ ಕ್ಷೇತ್ರ ಪ್ರೇರೆಪಿಸುತ್ತಿದೆ.